ಮಳೆ ಹಾನಿಯ ಪರಿಹಾರ ಕಾರ್ಯ ಚುರುಕು
Posted by editor on

ಬೆಂಗಳೂರು: ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಗಿರುವ ಬೆಳೆಹಾನಿ ಹಾಗೂ ಪ್ರಾಣಹಾನಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ತುರ್ತಾಗಿ ಸ್ಪಂದಿಸುತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಇದೇ ರೀತಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ ಟೆಲಿಗ್ರಾಂ ಚಾನಲ್‌ಗೆ ಸೇರಿಕೊಳ್ಳಿ.
ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಶಾಸಕ ಅರಗ ಜ್ಞಾನೇಂದ್ರ ಅವರ ಪ್ರಶ್ನೆಗೆ ಧ್ವನಿಗೂಡಿಸಿದ ಮಲೆನಾಡಿನ ಶಾಸಕರುಗಳಿಗೆ ಉತ್ತರಿಸಿದರು. ತೀರ್ಥಹಳ್ಳಿಯ ವಿದ್ಯಾರ್ಥಿನಿ ನೀರಲ್ಲಿ ಕೊಚ್ಚಿ ಹೋದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಸ್ಥಳಕ್ಕೆ ಹಿರಿಯ ಅಧಿಕಾರಿಗಳನ್ನು ಕಳುಹಿಸಲಾಗಿದೆ. ವಿದ್ಯಾರ್ಥಿನಿಯ ಕುಟುಂಬಕ್ಕೆ ಶಿಕ್ಷಣ ಇಲಾಖೆಯಿಂದ 1 ಲಕ್ಷ ರೂ. ಸಹಾಯಧನ ಘೋಷಿಸಲಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹೆಚ್ಚಿನ ಧನ ಸಹಾಯ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸ್ಥಳಕ್ಕೆ ಧಾವಿಸಿರುವ ಹಿರಿಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಮಳೆಯ ಸಮಯದಲ್ಲಿ ಉಂಟಾಗುವ ಮಲೆನಾಡಿನ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರ ಬದ್ಧವಾಗಿದೆ. ನಡೆದಾಡುವ ಮೇಲ್‍ಸೇತುವೆಗಳನ್ನು ಗುರುತಿಸಿ ತಕ್ಷಣ ದುರಸ್ತಿಮಾಡಲು ಹಾಗೂ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಅಧಿವೇಶನದ ನಂತರ ಮಲೆನಾಡಿನ ಜಿಲ್ಲೆಗಳ ಪ್ರವಾಸ ಕೈಗೊಂಡು ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವುದಾಗಿ ತಿಳಿಸಿದರು.