India Post

ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಸರ್ಕಾರದ ಅನುಮತಿ ಕಡ್ಡಾಯ: ಸಚಿವ ಬೈರತಿ ಸುರೇಶ

Posted by editor on
1st Image

ಬೆಂಗಳೂರು: ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ ಮತ್ತು ನಗರ ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಬರುವ ಖಾಸಗಿ ಬಡಾವಣೆಗಳ ಅನುಮೋದನೆಯನ್ನು ಇನ್ನು ಮುಂದೆ ಸರ್ಕಾರದ ಸಹಮತಿ ಪಡೆಯಬೇಕು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಶ್ರೀ ಬಿ. ಎಸ್.‌ ಸುರೇಶ (ಬೈರತಿ) ಅವರು ಸೂಚಿಸಿದ್ದಾರೆ.

ಇದೇ ರೀತಿ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಕೂಡಲೇ ಇಲ್ಲಿ ಕ್ಲಿಕ್ಕಿಸಿ ಟೆಲಿಗ್ರಾಂ ಚಾನಲ್‌ಗೆ ಸೇರಿಕೊಳ್ಳಿ.

ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು/ಯೋಜನಾ ಪ್ರಾಧಿಕಾರಗಳು ಸಾಧಿಸಿರುವ ಪ್ರಗತಿ ಕುರಿತಂತೆ ವಿಕಾಸಸೌಧದಲ್ಲಿ ನಡೆದ ಪರಿಶೀಲನಾ ಸಭೆ ನಡೆಸಿದ ಸಚಿವ ಬೈರತಿ‌ ಸುರೇಶ ಅವರು ಖಾಸಗಿ ಭೂಮಿಯಲ್ಲಿ ಬಡಾವಣೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರುವಾಗ ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಅದು ಏಕೆ ಸಾಧ್ಯವಾಗುತ್ತಿಲ್ಲವೆಂದು ಅಧಿಕಾರಿಗಳನ್ನು ಸಚಿವರಾದ ಪ್ರಶ್ನಿಸಿದರು.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆಯನ್ನು ರಚಿಸಿರುವುದು ಪ್ರಾಧಿಕಾರಗಳು ಬಡಾವಣೆಗಳನ್ನು ನಿರ್ಮಿಸಿ ರಾಜ್ಯದ ಜನ ಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ನಿವೇಶನಗಳು ಸಿಗುವಂತಾಗಲಿ ಎನ್ನುವ ಉದ್ದೇಶದಿಂದಲೇ ಹೊರತು ಖಾಸಗಿ ಬಡಾವಣೆಗಳ ನಿರ್ಮಾಣ ಮತ್ತು ನಕ್ಷೆ ಅನುಮೋದನೆ ನೀಡಲು ಅಲ್ಲ ಎಂದು ಸಚಿವರು ಖಾರವಾಗಿ ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರಗಳು ಅಥವಾ ಯೋಜನಾ ಪ್ರಾಧಿಕಾರಗಳಲ್ಲಿ ಇರುವ ಹಣವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಬಡ್ಡಿ ಆಸೆಯಿಂದ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಡದೆ ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡು ಬಡಾವಣೆಗಳ ನಿರ್ಮಾಣ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಸಭೆಯಲ್ಲಿ ಹಾಜರಿದ್ದ ನಗರಾಭಿವೃದ್ಧಿ ಪ್ರಾಧಿಕಾರಗಳ ಆಯುಕ್ತರು ಮತ್ತು ನಗರ ಯೋಜಕ ಸದಸ್ಯರು ಹಾಗು ಕಾರ್ಯದರ್ಶಿಗಳಿಗೆ ಸೂಚಿಸಿದರು.

ರೈತರ ಮನ ಒಲಿಸಿ ಅವರಿಂದ ಜಮೀನು ಪಡೆದು 50:50 ಅನುಪಾತದ ಅಡಿಯಲ್ಲಿ ಅಭಿವೃದ್ಧಿ ಪಡಿಸಿ ಸಾಮಾನ್ಯ ಜನರಿಗೆ ಲಭ್ಯವಾಗುವಂತೆ ಮಾಡುವುದು ಪ್ರಾಧಿಕಾರಗಳ ಕೆಲಸ ಅದನ್ನು ಬಿಟ್ಟು ಖಾಸಗಿ ಬಡಾವಣೆ ನಿರ್ಮಾಣ ಮತ್ತು ನಕ್ಷೆ ಅನುಮೋದನೆ ನೀಡುವುದಷ್ಟೆ ಕೆಲಸವಲ್ಲ ಎಂದು ಅಧಿಕಾರಿಗಳ ವಿರುದ್ಧ ಸಚಿವರು ಕಿಡಿಕಾರಿದರು.

ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್‌, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತರಾದ ಎನ್.‌ ವೆಂಕಟಾಚಲಪತಿ, ನಗರ ಮತ್ತು ಗ್ರಾಮಾಂತರ ಯೋಜನೆ ನಿರ್ದೇಶಕರಾದ ತಿಪ್ಪೇಸ್ವಾಮಿ, ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿಯಾದ ಕೃಷ್ಣಮೂರ್ತಿ ಸೇರಿದಂತೆ ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ (ಬೆಂಗಳೂರು ಹೊರತುಪಡಿಸಿ) ಆಯುಕ್ತರು, ನಗರ ಯೋಜಕ ಸದಸ್ಯರು/ಕಾರ್ಯದರ್ಶಿಗಳು ಉಪಸ್ಥಿತರಿದ್ದರು.