ಮಹಾಕುಂಭ ಮೇಳ 2025: ಈವರೆಗೆ 51 ಕೋಟಿ ಭಕ್ತರಿಂದ ಪುಣ್ಯ ಸ್ನಾನ

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಇದುವರೆಗೆ 51 ಕೋಟಿ 11 ಲಕ್ಷ ಭಕ್ತರು ಅಮೃತ ಸ್ನಾನ ಕೈಗೊಂಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ನಿನ್ನೆ ಒಂದೇ ದಿನದಲ್ಲಿ ಸುಮಾರು ಒಂದು ಕೋಟಿ 8 ಸಾವಿರ ಮಂದಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಕೈಗೊಂಡಿದ್ದಾರೆ. ಸಾಧು-ಸಂತರು, ನಾಗಾಸಾಧುಗಳು, ಅಘೋರಿ ಬಾಬಾಗಳಲ್ಲದೇ, ದೇಶ-ವಿದೇಶಗಳ ಗಣ್ಯಾತಿಗಣ್ಯರು ಸಹ ಮಹಾ ಕಂಭಮೇಳದಲ್ಲಿ ಪಾಲ್ಗೊಂಡು ಪುಣ್ಯಸ್ನಾನ ಕೈಗೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕುಂಭಮೇಳದ ಪುಣ್ಯಸ್ನಾನದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು, ಉತ್ತರ ಪ್ರದೇಶ ಸರ್ಕಾರ ಉತ್ತಮ ವ್ಯವಸ್ಥೆ ಮಾಡಿದೆ. ಹೀಗಾಗಿಯೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಲು ಸಹಕಾರಿಯಾಗಿದೆ. ಸ್ಥಳೀಯ ಆಡಳಿತ ಮತ್ತು ಪೊಲೀಸರು ಕೂಡ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕುಟುಂಬದ ಸದಸ್ಯರ ಜೊತೆಗೂಡಿ ಪುಣ್ಯಸ್ನಾನದಲ್ಲಿ ಪಾಲ್ಗೊಂಡಿದ್ದರು.
Shabd