ಮಹದೇಶ್ವರ ಬೆಟ್ಟದಲ್ಲಿ ವಾಹನ ದಟ್ಟಣೆ ತಡೆಗೆ ರಸ್ತೆ ವಿಸ್ತರಣೆ ಕಾಮಗಾರಿ
Posted by editor on in Category
08
49

ಮಹದೇಶ್ವರ ಬೆಟ್ಟ: ಇಲ್ಲಿನ ಕೊಳ್ಳೇಗಾಲ ಗೇಟ್ ಬಳಿಯ ಕಿರಿದಾದ ರಸ್ತೆಯಿಂದ ಆಗುತ್ತಿದ್ದ ವಾಹನ ದಟ್ಟಣೆ ತಡೆಯಲು ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರವು ಕಾಮಗಾರಿ ಕೈಗೊಂಡಿದೆ.
ಗೇಟ್ ಗೆ ಹೊಂದಿಕೊಂಡಿರುವ ಪ್ರಾಧಿಕಾರದ ಜಾಗದಲ್ಲಿ ಕಲ್ಲು ಮತ್ತು ಮಣ್ಣಿನಿಂದ ಆವೃತ್ತವಾದ ಗುಡ್ಡದ ಅಲ್ಪ ಭಾಗ ತೆರವುಗೊಳಿಸಲಾಗುತ್ತಿದೆ, ಕೊಳ್ಳೇಗಾಲ ಗೇಟ್ ನಿಂದ ಕನಿಷ್ಠ 2೦೦ ಮೀಟರ್ ಹಿಂದಕ್ಕೆ ತೆರವು ಮಾಡಿ, ರಸ್ತೆಯನ್ನು ತುರ್ತಾಗಿ ಅಗಲ ಮಾಡಿಸುವ ಕಾಮಗಾರಿಯನ್ನು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಕೈಗೊಂಡಿದ್ದಾರೆ. ರಸ್ತೆ ಅಗಲ ಮಾಡುವ ಕಾಮಗಾರಿ ಪೂರ್ಣಗೊಂಡ ನಂತರ ಹೊಸ ಮಾದರಿಯ ಟೋಲ್ ಗೇಟ್ ಕಾಮಗಾರಿ ಕೈಗೊಂಡು, ಆಧುನಿಕ ಉಪಕರಣ ಅಳವಡಿಸಲಾಗುವುದು. ರಸ್ತೆ ಅಗಲೀಕರಣ ಇನ್ನೊಂದು ವಾರದಲ್ಲಿ ಮುಗಿಯಲಿದೆ ಎಂದು ಕಾಮಗಾರಿ ನೇತೃತ್ವ ವಹಿಸಿರುವ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ. ಗೇಟ್ ಬಳಿ ರಸ್ತೆ ಅಗಲ ಬಹಳ ಕಡಿಮೆ ಇದ್ದು, ಒಂದೆಡೆ ಪ್ರಪಾತ ಇನ್ನೊಂದೆಡೆ ಪ್ರಾಧಿಕಾರದ ಜಾಗದಲ್ಲಿ ಕಲ್ಲಿನ ಗುಡ್ಡಯಿತ್ತು. ಇದರ ಮಧ್ಯೆಯಲ್ಲಿ ೩೦ ಅಡಿಗಿಂತ ಕಿರಿದಾದ ರಸ್ತೆ ಇತ್ತು. ವಾಹನ ಸಂಚಾರ ಅಧಿಕವಾದಾಗ ಕೊಳ್ಳೇಗಾಲ ಗೇಟ್ ಬಳಿ ತೀವ್ರ ವಾಹನದಟ್ಟಣೆ ಉಂಟಾಗಿ ಕೆಲವೊಮ್ಮೆ ಕಿಲೋಮೀಟರ್ ದೂರದವರೆಗೂ (ಹುಲಿ ಒಡ್ಡಿಗಿಂತ ಹಿಂದಿನವರೆಗೆ) ವಾಹನಗಳು ನಿಲ್ಲುತ್ತಿದ್ದವು.