ಹೈಕಮಾಂಡ್ ನಿಂದಲೇ ಅಭ್ಯರ್ಥಿಗಳ ತೀರ್ಮಾನ: ಡಿ.ಕೆ ಶಿವಕುಮಾರ್
Posted by editor on in Category
08
49

ಬೆಂಗಳೂರು: ಮುಂಬರುವ ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಗಳಿಗೆ ಅಭ್ಯರ್ಥಿಗಳ ಶಿಫಾರಸ್ಸು ಪಟ್ಟಿಯನ್ನು ಹೈಕಮಾಂಡ್ ಗೆ ನಾವು ಕಳುಹಿಸಿಕೊಡುತ್ತೇವೆ. ಅಂತಿಮ ತೀರ್ಮಾನವನ್ನು ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಜೆಡಿಎಸ್ ಮುಖಂಡ ಹನುಮಂತರಾಯಪ್ಪ ಅವರ ಪುತ್ರಿ ಕುಸುಮಾ ಎಚ್ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ನೂರಕ್ಕೂ ಹೆಚ್ಚು ಸ್ಥಳೀಯ ನಾಯಕರನ್ನು ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಪಕ್ಷ ಸೇರ್ಪಡೆಗೊಳಿಸಿದ ನಂತರ ಮಾತನಾಡಿದರು. ಕಾಂಗ್ರೆಸ್ ಅಭ್ಯರ್ಥಿಗಳು ಯಾರಾಗಬೇಕು ಎಂದು ಶಿಫಾರಸ್ಸು ಮಾಡಲು ಈಗಾಗಲೇ ಅನೇಕ ಚರ್ಚೆ ಮಾಡಿದ್ದೇವೆ. ಇಂದು ದೆಹಲಿಗೆ ಅಭ್ಯರ್ಥಿಗಳ ಹೆಸರನ್ನು ಶಿಫಾರಸ್ಸು ಮಾಡಲಾಗುವುದು ಎಂದರು. ಶಿರಾ ಕ್ಷೇತ್ರದಲ್ಲಿ ಟಿ.ಬಿ. ಜಯಚಂದ್ರ ಅವರು ಕಳೆದ ಚುನಾವಣೆಯಲ್ಲಿ 10 ಸಾವಿರ ಮತಗಳ ಅಂತರದಲ್ಲಿ ಸೊತ್ತಿದ್ದರು. ಈ ಬಾರಿ ಇಡೀ ಜಿಲ್ಲೆ ಒಟ್ಟಾಗಿ ಪಕ್ಷದ ಗೆಲುವಿಗೆ ಶ್ರಮಿಸಲಿದೆ. ಶಿರಾ ಕ್ಷೇತ್ರದ ಪ್ರಮುಖ ನಾಯಕರು ನಮ್ಮ ಸಿದ್ಧಾಂತ ಹಾಗೂ ನಾಯಕತ್ವ ನಂಬಿ ಪಕ್ಷಕ್ಕೆ ಆಗಮಿಸಿದ್ದಾರೆ. ಈ ರಾಜ್ಯದಲ್ಲಿನ ಆಡಳಿತ, ತಮ್ಮ ಕ್ಷೇತ್ರದಲ್ಲಿನ ಅಹಿತಕರ ಘಟನೆಗಳನ್ನು ಕಂಡು ಮುಂದಿನ ದಿನದಲ್ಲಿ ರಾಜ್ಯಕ್ಕೆ ಕಾಂಗ್ರೆಸ್ ಅನಿವಾರ್ಯ ಎಂದು ಅರಿತು 100ಕ್ಕೂ ಹೆಚ್ಚು ಶಿರಾದ ವಕೀಲರು ಹಾಗೂ ನಾಯಕರು ಪಕ್ಷಕ್ಕೆ ಸೇರಿದ್ದಾರೆ. ಇವರ ಸಾವಿರಾರು ಮಂದಿ ಹಿಂಬಾಲಕರು ಪಕ್ಷಕ್ಕೆ ಸೇರಲು ಮುಂದಾಗಿದ್ದಾರೆ. ಎಲ್ಲರನ್ನೂ ಕಾಂಗ್ರೆಸ್ ಕಚೇರಿಗೆ ಕರೆತರಲು ಆಗದ ಕಾರಣ 100 ಮಂದಿ ಮಾತ್ರ ಇಲ್ಲಿಗೆ ಬಂದು ಪಕ್ಷಕ್ಕೆ ಸೇರಿದ್ದಾರೆ ಎಂದರು.