16ರಂದು ಕಾವೇರಿ 5ನೇ ಹಂತದ ಲೋಕಾರ್ಪಣೆ
Posted by editor on in Category
08
49

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಸೌಲಭ್ಯ ಕಲ್ಪಿಸುವ ಕಾವೇರಿ ಐದನೇ ಹಂತದ ಯೋಜನೆ ಅ.16ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಿಂದ ಲೋಕಾರ್ಪಣೆಗೊಳ್ಳಲಿದೆ.
ಜೈಕಾ(ಜಪಾನ್ ಇಂಟರ್ ನ್ಯಾಷನಲ್ ಕೋ ಅಪರೇಶನ್ ಏಜೆನ್ಸಿ) ಸಹಭಾಗಿತ್ವದಲ್ಲಿ 4336 ಕೋಟಿ ರೂ.ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯಿಂದ ಬೆಂಗಳೂರು ನಗರಕ್ಕೆ ಹೆಚ್ಚುವರಿಯಾಗಿ 775 ಎಂಎಲ್ಡಿ ನೀರು ಪೂರೈಕೆಯಾಗಲಿದ್ದು, ಮೂಲೆಮೂಲೆಗೂ ಕಾವೇರಿ ನೀರು ಸರಬರಾಜಾಗಲಿದೆ. ಹೆಚ್ಚುವರಿಯಾಗಿ 50ಲಕ್ಷ ಜನರು ಇದರ ಸದುಪಯೋಗಪಡೆದುಕೊಳ್ಳಲಿದ್ದಾರೆ ಎಂದು ಉಪಮುಖ್ಯಮಂತ್ರಿಗಳು,ಜಲಸಂಪನ್ಮೂಲ ಸಚಿವರು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಯಶವಂತಪುರ, ದಾಸರಹಳ್ಳಿ, ಬ್ಯಾಟರಾಯನಪುರ, ಬೆಂಗಳೂರು ದಕ್ಷಿಣ, ಮಹದೇವಪುರ, ರಾಜರಾಜೇಶ್ವರಿನಗರ, ಕೆಆರ್ ಪುರ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿವಿಧ ಹಳ್ಳಿಗಳ ಮನೆ ಮನೆಗೆ ನೀರು ಸರಬರಾಜಾಗಲಿದೆ ಎಂದರು. ಯೋಜನೆಯ ಲೋಕಾರ್ಪಣೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ(ಟಿ.ಕೆ.ಹಳ್ಳಿ)ಯ ಬೆಂಗಳೂರು ಜಲಮಂಡಳಿ ಆವರಣದಲ್ಲಿ ಅ.16ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ/ರಾಜ್ಯ ಸಚಿವರು ಹಾಗೂ ಸಂಸದರು ಮತ್ತು ಶಾಸಕರು ಹಾಗೂ ಇನ್ನಿತರ ಎಲ್ಲ ಚುನಾಯಿತ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.