ಸವಿತಾ ಸಮಾಜವು ಅಮಂಗಲ ಎನ್ನೋದು ಅನುಚಿತ, ಅಸಂಗತ:ವಿಧುರಶೇಖರಭಾರತಿ ಸ್ವಾಮೀಜಿ
Posted by editor on in Category
08
49

ಬೆಂಗಳೂರು; ಸವಿತಾ ಸಮಾಜದವರು ಅಮಂಗಲ, ಅವರನ್ನು ನೋಡುವುದು ದುರದೃಷ್ಟ ಎಂಬ ಸಮಾಜದ ಮಾತುಗಳು ಅನುಚಿತ ಮತ್ತು ಶುದ್ಧ ಅಸಂಗತ ಎಂದು ಶೃಂಗೇರಿ ಶಾರದಾ ಮಠದ ಪೀಠಾಧೀಶ ವಿಧುರಶೇಖರಭಾರತಿ ಸ್ವಾಮೀಜಿ ತಿಳಿಸಿದರು.
ನಗರದ ಚಾಮರಾಜಪೇಟೆಯ ಶಂಕರಪುರದ ಶೃಂಗೇರಿ ಮಠದಲ್ಲಿ ಕೆ.ಆರ್. ನಗರದ ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠಾಧೀಶ ಶಂಕರಭಾರತಿ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ, ಶೃಂಗೇರಿ ಸ್ವಾಮೀಜಿಯವರು ಇತಿಹಾಸದಲ್ಲಿ ಮೊದಲ ಬಾರಿಗೆ ಸವಿತಾ ಸಮಾಜಕ್ಕೆ ವಿಶೇಷವಾಗಿ ಆಶೀರ್ವಚನ ನೀಡಿದರು. ಮಂಗಳಕಾರ್ಯಗಳಲ್ಲಿ ಮಂಗಳವಾದ್ಯ ನುಡಿಸುವವರನ್ನ ನೋಡಿದರೆ ಎಲ್ಲಾ ಮಂಗಳವಾಗುತ್ತದೆ. ಪ್ರತಿಯೊಬ್ಬರೂ ಎಲ್ಲ ಸಮಾಜದವರನ್ನು ಗೌರವದಿಂದ ಕಾಣಬೇಕು ಎಂದರು. ಕ್ಷೌರಿಕ ವೃತ್ತಿ ಮಾಡುವ ಮೂಲಕ ಸವಿತಾ ಸಮುದಾಯದವರು ನಮ್ಮೆಲ್ಲರನ್ನೂ ಸುಂದರವಾಗಿ ಕಾಣಿಸುವ ವೃತ್ತಿಯಲ್ಲಿದ್ದಾರೆ. ಅದೇ ರೀತಿ ವಾದ್ಯ ಸೇವೆ ದೇವರ ಸೇವೆಯಾಗಿದ್ದು, ಮಂಗಲವಾದ್ಯ ವಿಶೇಷ ವೃತ್ತಿಯಾಗಬೇಕು. ಈ ವೃತ್ತಿಗೆ ಶಾಶ್ವತವಾದ ನೆಲೆ, ಬೆಲೆ ಗೌರವ ಸಿಗುವಂತಾಗಬೇಕು. ಸರ್ಕಾರದಿಂದಲೂ ಸೂಕ್ತ ಪ್ರೋತ್ಸಾಹ ದೊರೆಯುವಂತಾಗಲಿ. ಈ ಎರಡೂ ವೃತ್ತಿಗಳಲ್ಲಿರುವ ಸವಿತಾ ಸಮಾಜ ಎಲ್ಲಾ ವಲಯಗಳಲ್ಲೂ ಮುಂಚೂಣಿಗೆ ಬರಬೇಕು ಎಂದು ಆಶಿಸಿದರು. ಕ್ಷೌರಿಕ ವೃತ್ತಿ ಮಾಡುವ ಸವಿತಾ ಸಮಾಜದವರ ಕುರಿತು ವಾಹಿನಿಗಳಲ್ಲಿ ಅವಹೇಳನ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಆದರೆ ನಿಜವಾಗಿ ಅಧ್ಯಯನ ಮಾಡಿದವರು ಎಂದೂ ಸಾರ್ವಜನಿಕವಾಗಿ ಮಾತನಾಡುವುದಿಲ್ಲ ಎಂದರು.